ಮಾವಿನ ಕೈ ಪುರಾಣ





ಇವತ್ತಿಗೆ ಹೆಚ್ಚು ಕಮ್ಮಿ 60 - 65 ವರ್ಷಗಳ ಹಿಂದಿನ ಬಂಗಾರದಂತ ಕಾಲವದು.....


ಪಶ್ಚಿಮ ಘಟ್ಟಗಳ ತಪ್ಪಲಿನ ಮಲೆನಾಡು ಭಾಗದ ಕಾಡಂಚಿನ ಒಂದು ಮನೆ "ಮಾವಿನ ಕೈ" . ಮಣ್ಣು ಸುಣ್ಣದ ಗೋಡೆ, ಮರದ ಅಡ್ಡೆಯ ಮೇಲೆ ಕೆಲವು ಕಡೆ ಮಂಗಳೂರು ಹೆಂಚು, ಉಳಿದ ಕಡೆ ಅಡಿಕೆ ಸೋಗೆ ಹೊದ್ದ ಪುಟ್ಟ ಮನೆ.  ಊರಿಗೊಂದೇ ಮನೆ. 


ಮನೆಯ ಬಾಗಿಲಿಗೆ ಅಡಿಕೆ ಚಪ್ಪರ/ ಅಟ್ಟ. ಅಂಗಳದ ತುದಿಗೆ ಮಾವು ಬೇವು, ಬಾಳೆ, ತೆಂಗು. ಎದುರಿನ ತೋಟದಲ್ಲಿ ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಕಾಳುಮೆಣಸು, ಲವಂಗ, ವೀಳ್ಯದೆಲೆಯಿಂದ ಕೂಡಿದ ಮಿಶ್ರ ಬೆಳೆಗಳು. ಪಕ್ಕದ ಗದ್ದೆಯಲ್ಲಿ ನಾಟಿ ಭತ್ತ, ಉದ್ದು, ತೊಗರಿ, ಹೆಸರು, ಶುಂಠಿ, ಮೆಣಸು, ಮಗೆ ಸೌತೆಯ ಬೆಳೆ. ಮನಗೆ ತಾಗಿಕೊಂಡಂತಿದ್ದ ಕೊಟ್ಟಿಗೆಯ ತುಂಬಾ ಮಲೆನಾಡು ಗಿಡ್ಡ ತಳಿಯ ದನಕರುಗಳು, ಹಾಲಿನ ಹೊಳೆ. ಅದರಾಚೆ ಎತ್ತಿನ ಕೊಟ್ಟಿಗೆ.  ನೇಗಿಲು, ಎತ್ತಿನ ಗಾಡಿ ಸೇರಿದಂತೆ ಕೃಷಿ ಪರಿಕರಗಳನ್ನು ಸಂಗ್ರಹಿಸಿಡುವ ಉಗ್ರಾಣ.

ಮನೆ ಹಿಂದಿನ ಬ್ಯಾಣದಲ್ಲಿ ನೆಲ್ಲಿ, ನೇರಳೆ, ಪೇರಳೆ, ಕೌಳಿ, ಪರಿಗೆ, ಮುಳ್ಳು ಹಣ್ಣುಗಳು. ಬೆಟ್ಟದಲ್ಲಿ ಮಾವು,  ಹಲಸು, ವಾಟೇ, ಉಪ್ಪಾಗೆ. ಮನೆಯ ಸುತ್ತಮುತ್ತಲಿನ  ತೋಟ, ಗದ್ದೆ, ಬೆಟ್ಟ, ಬ್ಯಾಣದಲ್ಲಿ ನೈಸರ್ಗಿಕವಾಗಿ ಹರಡಿರುವ ನೂರಾರು ಪ್ರಭೇದದ ತರಹೇವಾರಿ ಔಷಧೀಯ  ಸಸ್ಯಗಳು.

ನಿತ್ಯ ಊಟ ತಿಂಡಿಗೆ ಬಾಳೆ ಎಲೆಯ ಬಳಕೆ. ಅಡುಗೆ ಪದಾರ್ಥಗಳು ತಯಾರಾಗುತ್ತಿದ್ದುದು ಮನೆಯಲ್ಲೇ ಬೆಳೆದು ಹಸನು ಮಾಡಿದ ಕಾಳು, ಬೇಳೆ, ತರಕಾರಿಗಳಿಂದ, ಸುತ್ತಮುತ್ತಲೂ ಲಭ್ಯವಿದ್ದ ಸೊಪ್ಪು ಸದೆಗಳಿಂದ. 

ಬೆಳಗ್ಗೆ ಐದಕ್ಕೆ ಶುರುವಾಗುತ್ತಿದ್ದ  ದಿನಚರಿ ಕೊನೆಗೊಳ್ಳುತ್ತಿದ್ದುದು ರಾತ್ರಿ ಎಂಟಕ್ಕೆ. ಕತ್ತಲೆಯಲ್ಲಿ ಬೆಳಕಿಗಾಸರೆಯಾಗುತ್ತಿದ್ದುದು ಹರಳೆಣ್ಣೆಯ ದೀಪಗಳು.


ಯುಗಾದಿಯ ನಂತರ ಹಳೆಯ ಮಳೆ ಬೀಳವುದರೊಂದಿಗೆ ನಿಧಾನವಾಗಿ ಪ್ರಾರಂಭವಾಗುತ್ತಿದ್ದ ಮಳೆಗಾಲ, ನವರಾತ್ರಿ ಮುಗಿದು ದೀಪಾವಳಿಯ ವರೆಗೂ ಇರುತ್ತಿತ್ತು. ಮಳೆಗಾಲದಲ್ಲಿ ಉತ್ತನೆ, ಬಿತ್ತನೆ, ಮಣ್ಣು, ಗೊಬ್ಬರ, ಔಷಧಿಗಳ ಕೆಲಸ. ದೀಪಾವಳಿಯ ನಂತರ ಚಳಿಗಾಲದಲ್ಲಿ ಬೆಳೆಗಳ ಕಟಾವಿನ ಕೆಲಸ. ಗದ್ದೆ ಕೊಯ್ಲು, ಅಡಿಕೆ ಕೊಯ್ಲುಗಳ ಸಮಯ. ಸಂಕ್ರಾಂತಿ ಎಡಬಲಕ್ಕೆ ಹತ್ತು ಮೈಲಿ ದೂರದ ಮೆಣಸಗಾರು ಪೇಟೆಗೆ ಹೋಗಿ ಅತ್ಯಗತ್ಯದ ಸಾಮಗ್ರಿಗಳ ಖರೀದಿ ಮಾಡಿ, ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬಂದರೆ ಆ ವರ್ಷದ ಪೇಟೆಯ ವ್ಯಾಪಾರ ಮುಗಿದಂತೆ.  ವಿಪರೀತ ಅನಾರೋಗ್ಯ, ಬಸಿರು, ಬಾಳಂತನದಲ್ಲಿ ತುರ್ತಾಗಿ ಬೇಕಾಗುವ ಔಷಧೋಪಚಾರಕ್ಕೆ ಮಾತ್ರ ಪೇಟೆ ಕಡೆಗೆ ಮುಖ ಮಾಡಬೇಕು. ಉಳಿದಂತೆ ಸಣ್ಣಪುಟ್ಟ  ಜ್ವರ, ನೋವು, ಬೇನೆಗಳಿಗೆ ಮನೆಮದ್ದೇ ಆಧಾರ.


ವ್ಯಾಪಾರ ವ್ಯವಹಾರವೆಲ್ಲಾ ನೆಡೆಯುತ್ತಿದ್ದುದು ಕೊಡು-ಕೊಳ್ಳುವ ವಿನಿಮಯ ವ್ಯವಸ್ಥೆಯಲ್ಲಿ.

ಆಡಂಬರ , ಶ್ರೀಮಂತಿಕೆ, ದುಂದುವೆಚ್ಚಗಳಿಲ್ಲದ ಸಂಪದ್ಭರಿತ ಜೀವನ. ಕಷ್ಟವಾನಿ ಜೀವಿಗಳು. 


ನನ್ನ ಅಜ್ಜ ಅಂದರೆ ನನ್ನ ಅಪ್ಪನ ಅಪ್ಪ ಬಚ್ಚಗಾರು ನಾರಾಯಣಪ್ಪ ಅವರ ದಿನಚರಿ, ಬದುಕು ಮಾವಿನ ಕೈ ಪರಿಸರದಲ್ಲಿ ಹೀಗೆ ಸುವ್ಯವಸ್ಥಿತವಾಗಿತ್ತು.


 ಬಚ್ಚಗಾರಿನ ಮೂಲ ಮನೆಯನ್ನು ತನ್ನ ತಮ್ಮನ ಸಂಸಾರಕ್ಕೆ ಬಿಟ್ಟುಕೊಟ್ಟು, ತಾನು "ಮಾವಿನ ಕೈ" ಎಂಬ ಜಾಗದಲ್ಲಿ, ಹತ್ತು ಹದಿನೈದು ವರ್ಷಗಳ ಕಾಲ ಕಷ್ಟಪಟ್ಟು ಹೊಸದಾಗಿ ಬದುಕು ಕಟ್ಟಿಕೊಂಡು ತನ್ನ ಅಸ್ತಿತ್ವವನ್ನು ಪುನರ್ ಸ್ಥಾಪಿಸಿಕೊಂಡು ನೆಮ್ಮದಿಯ ಜೀವನ ನೆಡೆಸುತ್ತಿದ್ದಂತ ಕಾಲದಲ್ಲಿ,  ಜೀವ ಮತ್ತು ಜೀವನವನ್ನು ತೊಳೆಯಲು ಮನೆಯ ಬಾಗಿಲಿಗೇ ಬಂದು ನಿಂತಿದ್ದಳು " ಶರಾವತಿ" .

ನಾನೆಂದೂ ನೋಡಿರದ "ಮಾವಿನ ಕೈ" ಮತ್ತು ಅಜ್ಜನ ವರ್ಷಗಳ ಪರಿಶ್ರಮ ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು,


ಹವ್ಯಕ ಅಡುಗೆ: ಜೀರಿಗೆ ಮಾವಿನ ಸೊನೆಯ ಮಜ್ಜಿಗೆ ತಂಬುಳಿ

ಶೇಖರಿಸಿಟ್ಟ ಜೀರಿಗೆ ಮಾವಿನ ಸೊನೆಯ ಆರೆಂಟು ಹನಿಯನ್ನು  ನೀರು ಮಜ್ಜಿಗೆಗೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಸಾಸಿವೆ  ಮತ್ತು ಒಣಮೆಣಸಿನ ಒಗ್ಗರಣೆ ಕೊಟ್ಟು ಒಣಮೆಣಸನ್ನು ಚೆನ್ನಾಗಿ ನುರಿಯಬೇಕು. ಪರಿಮಳ ಭರಿತ ತಂಬುಳಿ ತಯಾರು.




Comments